ವೈಜ್ಞಾನಿಕ ವಿಧಾನ -
	ನಿಸರ್ಗದ ನಿಯಮಗಳನ್ನು ಅನ್ವೇಷಿಸ ಬಯಸುವ ಮಾನವನ ಕುತೂಹಲಭರಿತ ಮತಿ ಅನುಸರಿಸಬೇಕಾದ ಕ್ರಮ (ಸೈಂಟಫಿಕ್ ಮೆತಡ್). ಇದರಲ್ಲಿ ಸಾಧಾರಣವಾಗಿ 6 ಉತ್ತರೋತ್ತರ ಹಂತಗಳಿವೆ : ಸಮಸ್ಯಾ ನಿರೂಪಣೆ, ಮಾಹಿತಿ ಸಂಗ್ರಹಣೆ, ವಿಶ್ಲೇಷಣೆ, ವಾದರೂಪಣೆ, ಪ್ರಾಯೋಗಿಕ ತಪಾಸಣೆ, ಸಿದ್ಧಾಂತ ಮಂಡನೆ ಇವೆಲ್ಲವುಗಳ ತಳದಲ್ಲಿವೆ ವಿಜ್ಞಾನದ ಆದ್ಯುಕ್ತಿಗಳು. 

	ನಿಸರ್ಗ ಮಾನವನೆದುರು ಒಡ್ಡುವ ಸಮಸ್ಯೆಗಳು ಅಸಂಖ್ಯ. ಆದ್ದರಿಂದ ಚಿಕಿತ್ಸಕ ಮನದ ವೀಕ್ಷಕ ತಾನು ಪರಿಹರಿಸಬೇಕಾದ ಸಮಸ್ಯೆಯನ್ನು ಖಚಿತವಾಗಿ ನಿರೂಪಿಸುವುದು ಆದ್ಯ ಅಗತ್ಯ. ಬಳಿಕ ಇದಕ್ಕೆ ಸಂಬಂಧಿಸಿದ ಹಾಗೂ ಸಂಬಂಧಿಸಬಹುದಾದ ಸಮಸ್ತ ಮಾಹಿತಿಗಳನ್ನೂ ಕಲೆಹಾಕಬೇಕು. ಮಾಹಿತಿಗಳ ಈ ಮಹಾಪೂರವನ್ನು ತನ್ನ ತಾರ್ಕಿಕ ಮತಿ ಒಪ್ಪುವ ರೀತಿಯಲ್ಲಿ ವಿಶ್ಲೇಷಿಸುವುದು ಅನಿವಾರ್ಯ. ತರುವಾಯದ (ಮೂರನೆಯ) ಹಂತದಲ್ಲಿ ಆತನ ಪ್ರತ್ಯುತ್ಪನ್ನ ಮತಿಗೆ ಸಮಸ್ಯೆಯ ಪರಿಹಾರ ಹೊಳೆಯುವ ಸಾಧ್ಯತೆ ಇದೆ-ಅವನ ಸುಪ್ತ ಪ್ರತಿಭಾನ ಅಥವಾ ಅಂತರ್ಬೋಧೆ (ಇಂಟ್ಯೂಷನ್) ಇಲ್ಲಿ ಕ್ರಿಯಾಶೀಲವಾಗಿರುತ್ತದೆ. ಹೀಗೆ ಮಿನುಗಿದ ಪರಿಹಾರವೇವಾದ (ಹೈಪಾಥಿಸಿಸ್). ಇದೊಂದು ತಾತ್ಪೂರ್ತಿಕ ಒಡಪು ಮಾತ್ರ. ಇದನ್ನು ಪ್ರಾಯೋಗಿಕವಾಗಿ ಸಮಸ್ಯೆಗೆ ಅನ್ವಯಿಸಿ ಇದರ ಯಾಥಾಥ್ರ್ಯವನ್ನು ದೃಢೀಕರಿಸಿಕೊಳ್ಳಬೇಕು. ಇಂಥ ದೃಢೀಕರಣ ಸಾಧಿಸುವ ತನಕ ಸಮಸ್ಯೆಗೆ ಪರಿಹಾರವಿಲ್ಲ. ಅನೇಕ ಸಂದರ್ಭಗಳಲ್ಲಿ ಸಮಗ್ರ ಸಮಸ್ಯೆಯನ್ನೇ ಪುನರ್ವಿಮರ್ಶಿಸಲೂ ಬೇಕಾಗುತ್ತದೆ. ಹೀಗೆ ಮೊದಲ 5 ಅಗ್ನಿ ಪರೀಕ್ಷೆಗಳಲ್ಲಿಯೂ ಉತ್ತೀರ್ಣವಾಗುವ ವಾದವನ್ನು ಸಮರ್ಪಕವಾಗಿ ಕ್ರೋಡೀಕರಿಸಿ ಸಿದ್ಧಾಂತವನ್ನು (ತೀಯರಿ) ಮಂಡಿಸಬೇಕು. ಇದೇ ಸಮಸ್ಯೆಯ ಪರಿಹಾರ. ಆದರೆ ಇದೇನೂ ಶಾಶ್ವತ ಪರಿಹಾರವಲ್ಲ; ಏಕೆಂದರೆ ವಿಜ್ಞಾನ ಪ್ರಗತಿಸಿದಂತೆ, ತಂತ್ರವಿದ್ಯ (ಟೆಕ್ನಾಲಜಿ) ಪ್ರವರ್ಧಿಸಿದಂತೆ ಅಂದಿನ ಸಿದ್ಧಾಂತ ಇಂದಿನ ಸಮಸ್ಯೆಯನ್ನು ಪರಿಹರಿಸುವಲ್ಲಿ ಸೋಲಬಹುದು. ಇಂಥ ಪರಿಸ್ಥಿತಿ ಎದುರಾದಾಗ ಹೊಸ ಬೆಳಕಿನಲ್ಲಿ ಹಳೆ ಸಿದ್ಧಾಂತದ ಪುನರವಲೋಕನ ಮತ್ತು ಯುಕ್ತ ಮಾರ್ಪಾಡು ಅತ್ಯಗತ್ಯ. ವಿಜ್ಞಾನದ ಯಾವುದೇ ವಿಭಾಗ ನಡೆದು ಬಂದ ದಾರಿಯನ್ನು ವಿವಿಧ ಕಾಲಘಟ್ಟಗಳಲ್ಲಿ ಸೂಕ್ಷ್ಮವಾಗಿ ಪರಿಶೀಲಿಸಿದರೆ ಈ ಸಂಗತಿ ಸ್ಪಷ್ಟವಾಗುತ್ತದೆ.		 (ನೋಡಿ- ವೈಜ್ಞಾನಿಕತೆ)	
	*

   *

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ